ಈ ಟಿಪ್ಪಣಿಯು,
ಹದಿನೇಳನೆಯ ಶತಮಾನದವರೆಗೆ ರಚಿತವಾದ ಕನ್ನಡ ವ್ಯಾಕರಣದ ಪಠ್ಯಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡಿದೆ.
ಆದರೆ, ಕನ್ನಡದಲ್ಲಿ ದೊರಕಿರುವ ಮೊಟ್ಟಮೊದಲ ಕೃತಿಯಾದ
ಕವಿರಾಜಮಾರ್ಗದಲ್ಲಿಯೇ ಕನ್ನಡ ವ್ಯಾಕರಣವನ್ನು ಕುರಿತ ಮಾಹಿತಿಗಳಿವೆ. ವಾಸ್ತವವಾಗಿ,
ಅದು ಕನ್ನಡ ಸಂಸ್ಕೃತಿಯ ಹಲವು ಆಯಾಮಗಳ ಪಕ್ಷಿನೋಟವನ್ನು ನೀಡುವ
ಪುಸ್ತಕ. ಅದರ ಲೇಖಕನು ಕನ್ನಡದ ಬೇರೆ ಬೇರೆ ಉಪಭಾಷೆಗಳನ್ನು ಸ್ಪಷ್ಟವಾಗಿ ಹೆಸರಿಸಿ,
ಪ್ರಮಾಣಭಾಷೆಯೊಂದನ್ನು ಉಪಯೋಗಿಬೇಕೆಂದು ವಾದಿಸುತ್ತಾನೆ. ಅವನು
ಕರ್ನಾಟಕದ ಒಂದು ಭಾಗವನ್ನು ಕನ್ನಡದ ತಿರುಳು ಎಂದು ಹೆಸರಿಸುತ್ತಾನೆ. ಕನ್ನಡ ಭಾಷೆಯ ಪ್ರಮುಖ ವ್ಯಾಕರಣ
ಪುಸ್ತಕಗಳನ್ನು ಇಲ್ಲಿ ಹೆಸರಿಸಲಾಗಿದೆ.
1. ಶಬ್ದಸ್ಮೃತಿ,
ನಾಗವರ್ಮ-2, ಕ್ರಿ.ಶ. 1042
2. ಕರ್ನಾಟಕ ಭಾಷಾಭೂಷಣ,
ನಾಗವರ್ಮ-2, ಕ್ರಿ.ಶ. 1042
3. ಶಬ್ದಮಣಿದರ್ಪಣ,
ಕೇಶಿರಾಜ, ಸುಮಾರು ಕ್ರಿ.ಶ. 1260
4. ಕರ್ನಾಟಕ ಶಬ್ದಾನುಶಾಸನ,
ಭಟ್ಟಾಕಳಂಕ, ಕ್ರಿ.ಶ. 1604
ಇವುಗಳಲ್ಲಿ ಎರಡನೆಯ ಮತ್ತು ನಾಲ್ಕನೆಯ ಪಠ್ಯಗಳು ಸಂಸ್ಕೃತದಲ್ಲಿವೆ.
ಮೊದಲನೆಯದು ಕಾವ್ಯಾವಲೋಕನ ಎನ್ನುವ ಇನ್ನೊಂದು ಕೃತಿಯ ಒಂದು ಆಧ್ಯಾಯಕ್ಕೆ ಸೀಮಿತವಾಗಿದೆ. ಈ ಸಂಗತಿಯು
ಕನ್ನಡದ ವ್ಯಾಕರಣ ಗ್ರಂಥಗಳ ಕೊರತೆಗೆ ಕನ್ನಡಿ ಹಿಡಿಯುತ್ತದೆ. ಹಾಗೆ ನೋಡಿದರೆ,
ಕೇಶೀರಾಜನ ‘ಶಬ್ದಮಣಿದರ್ಪಣ’ವೊಂದೇ
ಕನ್ನಡ ವ್ಯಾಕರಣವನ್ನು ಕುರಿತು, ಕನ್ನಡದಲ್ಲಿಯೇ ಬರೆದಿರುವ
ಸಮಗ್ರವಾದ ಕೃತಿ. ಸಾಮಾನ್ಯ ಜನರು, ತಮ್ಮ ಭಾಷೆಯ ವ್ಯಾಕರಣವನ್ನು
ವಿವರವಾಗಿ, ವ್ಯವಸ್ಥಿತವಾಗಿ ಕಲಿಯುವ ಅವಕಾಶವಾಗಲೀ ಅಗತ್ಯವಾಗಲೀ(?) ಇರಲಿಲ್ಲವೆನ್ನುವುದನ್ನು ಇದು ತೋರಿಸುತ್ತದೆ ಏಕೆಂದರೆ,
ಅಮತಹ ತಿಳಿವಳಿಕೆಯು ಅನಕ್ಷರಸ್ಥರಿಗೆ ಅನಗತ್ಯವೆಂದು ತೀರ್ಮಾನಿಸಲಾಗಿತ್ತು.
ಸುಶಿಕ್ಷಿತರಿಗೆ ಹೇಗಿದ್ದರೂ ಸಂಸ್ಕೃತದ ಪರಿಚಯ ಇರುತ್ತಿತ್ತು.
ಕೇಶಿರಾಜನೂ ಸೇರಿದಂತೆ,
ಈ ಎಲ್ಲ ವ್ಯಾಕರಣಕಾರರೂ ಯಾವ ಹಿಂಜರಿಕೆಯೂ ಇಲ್ಲದೆ,
ಸಂಸ್ಕೃತ ವ್ಯಾಕರಣಗಳನ್ನು ತಮ್ಮ ಮಾದರಿಯಾಗಿ ಒಪ್ಪಿಕೊಂಡರು. ಅದರ ನಿಯಮಗಳನ್ನು ಕನ್ನಡಕ್ಕೆ ಅನ್ವಯಿಸಲು
ಪ್ರಯತ್ನಿಸಿದರು. ಕನ್ನಡವು ದ್ರಾವಿಡ ಭಾಷೆಗಳಲ್ಲಿ ಒಂದೆಂಬ ಸಂಗತಿಯು,
ಅನುಮಾನಕ್ಕೆ ಆಸ್ಪದವಿಲ್ಲದಂತೆ ಸ್ಪಷ್ಟವಾಗಿರುವ ಈ ದಿನಗಳಲ್ಲಿಯೂ ಸಂಸ್ಕೃತ ಮಾದರಿಗಳ ಬಳಕೆಯನ್ನು
ಬೆಂಬಲಿಸುವವರು ಇದ್ದಾರೆ.
‘ಶಬ್ದಸ್ಮೃತಿ’ಯಲ್ಲಿ ಕೇವಲ ತೊಂಬತ್ತಾರು ಸೂತ್ರಗಳಿವೆ. ಅವುಗಳಿಗೆ,
ಇಂದು ಅನುಪಲಬ್ಧವಾಗಿರುವ ಹಳಗನ್ನಡ ಸಾಹಿತ್ಯಕೃತಿಗಳಿಂದ ಉದಾಹರಣೆಗಳನ್ನು
ಕೊಡಲಾಗಿದೆ. ಆದ್ದರಿಂದಲೇ ಸಾಹಿತ್ಯಚರಿತ್ರೆಯಲ್ಲಿ ಆಸಕ್ತಿಯಿರುವರಿಗೆ ಈ ನಿದರ್ಶನಗಳು ಸೂತ್ರಗಳಿಗಿಂತ
ಮುಖ್ಯವಾಗಿಬಿಟ್ಟಿವೆ. ಅವು ಪ್ರಾಚೀನ ಕನ್ನಡ ಕವಿಗಳ ಕಾಲ ಮತ್ತು ಕೃತಿಗಳನ್ನು ಕಂಡುಕೊಳ್ಳುವ ಕೆಲಸದಲ್ಲಿ
ಸಹಾಯವಾಗುತ್ತವೆ. ಅವರಲ್ಲಿ ಅನೇಕ ಕೃತಿಗಳು ಕವಿರಾಜಮಾರ್ಗಕ್ಕಿಂತ ಹಳೆಯವು.
ಸಂಸ್ಕೃತದಲ್ಲಿರುವ ಕರ್ನಾಟಕ ಭಾಷಾಭೂಷಣದಲ್ಲಿ 269 ಸೂತ್ರಗಳಿವೆ.
ಈ ಸೂತ್ರಗಳಿಗೆ ಅಗತ್ಯವಾದ ವಿವರಣೆಗಳನ್ನು(ವೃತ್ತಿ) ನಾಗವರ್ಮನೇ ಕೊಟ್ಟಿದ್ದಾನೆ. ಹೆಸರು ತಿಳಿಯದ
ವಿದ್ವಾಂಸನೊಬ್ಬನು ಹದಿನೇಳನೆಯ ಶತಮಾನದಲ್ಲಿ ಈ ಪುಸ್ತಕಕ್ಕೆ ವ್ಯಾಖ್ಯಾನವನ್ನು ಬರೆದಿದ್ದಾನೆ.
ಶಬ್ದಮಣಿದರ್ಪಣವು ಪ್ರಾಚೀನ ಕನ್ನಡದ ಅತ್ಯುತ್ತಮ ವ್ಯಾಕರಣಗ್ರಂಥವೆನ್ನುವುದರಲ್ಲಿ
ಯಾವ ಅನುಮಾನವೂ ಇಲ್ಲ. ಕೇಶಿರಾಜ ಕೂಡ ಸಂಸ್ಕೃತ ವ್ಯಾಕರಣವು ನೀಡಿದ ಚೌಕಟ್ಟನ್ನು ಒಪ್ಪಿಕೊಂಡಿರುವನೆನ್ನುವುದು
ನಿಜ. ಆದರೆ, ಅವನಿಗೆ ಕನ್ನಡದ ರಚನೆ ಮತ್ತು ಬಳಕೆಗಳಲ್ಲಿ
ಗುತ್ತಿದ್ದ ಬದಲಾವಣೆಗಳನ್ನು ಗುರುತಿಸುವ ಬುದ್ಧಿಸಾಮರ್ಥ್ಯವೂ ಅವುಗಳನ್ನು ವಿವರಿಸುವ ಪ್ರಾಮಾಣಿಕತೆಯೂ
ಇದ್ದವು. ಅವನು ತಲುಪಿರುವ ಕೆಲವು ತೀರ್ಮಾನಗಳು ಮತ್ತು ವಿಧಿಸಿರುವ ನಿಯಮಗಳು ಕಾಲದ ಪರೀಕ್ಷೆಯಲ್ಲಿ
ತೇರ್ಗಡೆಯಾಗಿಲ್ಲ. ಕನ್ನಡವು ಅವನ ಅಪೇಕ್ಷೆಗಿಂತ ಭಿನ್ನವಾದ ಬಗೆಗಳಲ್ಲಿಯೂ ಬದಲಾವಣೆಯಾಗಿದೆ. ಅವನು
ನೀಡಿರುವ ನಿದರ್ಶನಗಳಿಗೆ ಕೇವಲ ಸಾಹಿತ್ಯಕೃತಿಗಳು ಮಾತ್ರ ಅಕರವಾಗಿಲ್ಲ. ಜನಸಾಮಾನ್ಯರ ದಿನಬಳಕೆಯ ಭಾಷೆಯು
ಅವನ ಮುಖ್ಯವಾದ ಮೂಲಗಳಲ್ಲಿ ಒಂದು. ಅವನ ನಿರೂಪಣೆಯ ರೀತಿಯು ಆಧುನಿಕವಾದ ಅಳತೆಗೋಲುಗಳಿಂದ ಪರಿಶೀಲಿಸಿದಾಗಲೂ
ಸಾಕಷ್ಟು ವೈಜ್ಞಾನಿಕವಾಗಿದೆ. ಕನ್ನಡದ ಧ್ವನಿರಚನೆ,
ಧ್ವನಿಮಾ ರಚನೆ ಮತ್ತು ಪದರಚನೆಗಳನ್ನು ಅವನು ವಿವರಿಸಿರುವ ರೀತಿಯು ಬಹುಮಟ್ಟಿಗೆ ಸಮಾಧಾನಕರವಾಗಿದೆ.
ಸ್ವತಃ ಕಾವ್ಯಪ್ರತಿಭೆಯನ್ನು ಹೊಂದಿದ್ದ ಕೇಶಿರಾಜನು ತನ್ನ ಉದಾಹರಣೆಗಳನ್ನು ಬಹಳ ಎಚ್ಚರಿಕೆಯಿಂದ ಆರಿಸಿಕೊಂಡಿದ್ದಾನೆ.
ಅನೇಕ ನಿದರ್ಶನಗಳಲ್ಲಿ ಸಾಹಿತ್ಯದ ಗುಣಗಳಿವೆ.
ಕ್ರಿ.ಶ.1604 ರಲ್ಲಿ ರಚಿತವಾಗಿರುವ ಕರ್ನಾಟಕ ಶಬ್ದಾನುಶಾಸನವು
ಸಾಕಷ್ಟು ನಿಕರವಾದ ನಿಯಮಗಳನ್ನು ನೀಡುತ್ತದೆ. ಆದರೆ,
ಭಟ್ಟಾಕಳಂಕನು ಅವುಗಳಿಗೆ ಸೂಕ್ತವಾದ ಉದಾಹರಣೆಗಳನ್ನು ಕೊಟ್ಟಿಲ್ಲ. ಸ್ವತಃ ಲೇಖಕನೇ ತನ್ನ ಪುಸ್ತಕಕ್ಕೆ
ಭಾಷಾಮಂಜರಿಯೆಂಬ ವೃತ್ತಿಯನ್ನೂ ಮಂಜರಿ ಮಕರಂದವೆಂಬ ವ್ಯಾಖ್ಯಾನವನ್ನೂ ಬರೆದಿದ್ದಾನೆ. ಕೆಲವು ವಿದ್ವಾಂಸರು
ಈ ವೃತ್ತಿ ಹಾಗೂ ವ್ಯಾಖ್ಯಾನಗಳನ್ನು ಬೇರೆ ಯಾರೋ ಬರೆದಿರಬಹುದೆಂದು ಶಂಕಿಸಿದ್ದಾರೆ. ವಿಧಾಯಕವಾದ ನಿಯಮಗಳನ್ನು
ಕಡ್ಡಾಯವಾಗಿ ಹೇರುವುದರಲ್ಲಿಯೇ ಆಸಕ್ತನಾಗಿರುವ ಭಟ್ಟಾಕಳಂಕನು ತನ್ನ ಪರಿಸರದಲ್ಲಿ ನಡೆಯುತ್ತಿದ್ದ
ಭಾಷಿಕ ಪರಿವರ್ತನೆಗಳನ್ನು ಗಮನಿಸಿದಂತೆ ತೋರುವುದಿಲ್ಲ. ಒಂದು ವೇಳೆ ಗಮನಿಸಿದ್ದರೂ ಅವು ಅವನಗೆ ಒಪ್ಪಿಗೆಯಾದಂತಿಲ್ಲ.
ಈ ವ್ಯಾಕರಣಗಳನ್ನು ಒಟ್ಟಾಗಿ ನೋಡಿದಾಗ,
ನಮಗೆ ಕೊಂಚ ನಿರಾಶೆಯೇ ಆಗುತ್ತದೆ. ಏಕೆಂದರೆ, ಸಂಸ್ಕೃತದ
ಮೇಲಿನ ಅವಲಂಬನೆಯು ಅವುಗಳನ್ನು ದ್ರಾವಿಡ ಭಾಷೆಗಳ ಪರಂಪರೆಯಿಂದ ದೂರ ಕರೆದೊಯ್ದಿದೆ. ಇಂದು ಅಂತಹ ದ್ರಾವಿಡ
ನೆಲೆಗಳನ್ನು ಹುಡುಕಿ ತೆಗೆಯಬೇಕಾಗಿದೆ. ತಮಿಳು ಭಾಷೆಯ,
ಬಹು ಹಳೆಯ ವ್ಯಾಕರಣಗಳಾದ ತೋಲ್ಕಾಪ್ಪಿಯಂ ಮತ್ತು ನನ್ನೂಲ್ ಗಳನ್ನು ಗಮನಿಸಿದಾಗ ನಮ್ಮ ವ್ಯಾಕರಣಕಾರರು
ಕಳೆದುಕೊಂಡ ಅವಕಾಶಗಳ ಬಗ್ಗೆ ವಿಷಾದವಾಗುತ್ತದೆ. ಸಂಸ್ಕೃತ ವ್ಯಾಕರಣ ಮತ್ತು ಭಾಷೆಯ ಲಿಖಿತ ರೂಪಗಳ
ಮೇಲಿನ ಈ ಅವಲಂಬನೆಯು ಅನಂತರವೂ ಮುಂದುವರಿಯಿತು. ನಮ್ಮ ಶಾಲಾಪಠ್ಯಗಳೂ ಇಂತಹುದೇ ಮಾಹಿತಿಯನ್ನು ಉಳಿಸಿಕೊಂಡವು.
ಆದ್ದರಿಂದ ನಮಗೆ ಲಭ್ಯವಿರುವ ೆಲ್ಲ ಭಾಷಿಕ ಮೂಲಗಳು ಮತ್ತು ಇತರ ದ್ರಾವಿಡ ಭಾಷೆಗಳ ಪ್ರಾಚೀನ ವ್ಯಾಕರಣಗಳನ್ನು
ಪರಿಶೀಲಿಸಿ, ಕನ್ನಡ ಭಾಷೆಯ ಪ್ರಾಚೀನ ಹಂತಗಳ ವ್ಯಾಕರಣವನ್ನು ಮರುರಚನೆ ಮಾಡುವುದು ಇಂದಿನ ಅಗತ್ಯವಾಗಿದೆ.
ಮುಂದಿನ ಓದು
- ಪ್ರಾಚೀನ ಕನ್ನಡ ವ್ಯಾಕರಣಗಳು, ಎಂ.ವಿ. ಸೀತಾರಾಮಯ್ಯ, 1979,
ಕನ್ನಡ ಅಧ್ಯಯನಸಂಸ್ಥೆ , ಮೈಸೂರು ವಿಶ್ವವಿದ್ಯಾಲಯ, ಮೈಸೂರು.
- ವ್ಯಾಕರಣಗಳು, ಸಂ. ವಿ. ಸೀತಾರಾಮಯ್ಯ, 1973, ಕವಿ-ಕಾವ್ಯ
ಪರಂಪರೆ, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು.
- ಕನ್ನಡ ವ್ಯಾಕರಣ ಪರಂಪರೆ, ಡಿ.ಎನ್. ಶಂಕರಭಟ್, ಕನ್ನಡ ವಿಶ್ವವಿದ್ಯಾಲಯ,
ಹಂಪಿ.
- ವ್ಯಾಕರಣಶಾಸ್ತ್ರದ ಪರಿವಾರ, ಎನ್. ರಂಗನಾಥಶರ್ಮ, 2002,
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ.
- ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಅಧ್ಯಯನ, ಕೆ. ಕುಶಾಲಪ್ಪಗೌಡ,
1986, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
- History of Grammatical Theories in Kannada, J.S.
Kulli, 1999, Karnataka
University,
Dharwar.